ಇಸ್ಲಾಮಾಬಾದ್
ಜಮ್ಮು ಮತ್ತು ಕಾಶ್ಮೀರದಲ್ಲಿ ಶ್ರೀನಗರದ ಆಗ್ನೇಯಕ್ಕೆ 56 ಕಿ.ಮೀ. ದೂರದಲ್ಲಿ ಝೀಲಂ ನದೀದಡದ ಮೇಲಿರುವ ಪಟ್ಟಣ. ಇಂದಿನ ಹೆಸರು ಅನಂತ್‍ನಾಗ್, ಪ್ರಸ್ಥಭೂಮಿಯ ಬುಡದಲ್ಲಿದೆ. ಇದರ ಅಂಚಿನಲ್ಲಿ ಸೂಚ್ಯಗ್ರ ಪರ್ವತವಿದೆ. ಪಟ್ಟಣದ ಹತ್ತಿರ ಅನೇಕ ಚಿಲುಮೆಗಳಿವೆ; ಅತಿ ದೊಡ್ಡದು ಅನಂತನಾಗ್. ಈ ಹೆಸರೇ ಪಟ್ಟಣಕ್ಕೂ ಬಂದಿದೆ. ಮಲ್ಲಿಕ್‍ನಾಗ್ ಎಂಬ ಇನ್ನೊಂದು ಚಿಲುಮೆ ಗಂಧಕಾಶವನ್ನೊಳಗೊಂಡಿರುವುದರಿಂದ ತೋಟಗಳ ವ್ಯವಸಾಯಕ್ಕೆ ಉಪಯುಕ್ತವಾಗಿದೆ. ಕಾಶ್ಮೀರದ ದೊಡ್ಡ ಕಣಿವೆಯಲ್ಲಿ ಇದೊಂದು ಅತಿರಮ್ಯ ಸ್ಥಳ. ಹಿಂದೆ ಕಾಶ್ಮೀರದ ರಾಜಧಾನಿ, ಈಗ ಕ್ಷೀಣಿಸುತ್ತಿದೆ. ಬೇಸಿಗೆಯಲ್ಲಿ ಉಪಯೋಗಿಸುತ್ತಿದ್ದ ಒಂದು ಅರಮನೆ, ಸುಂದರ ಮಸೀದಿ, ದೇವಸ್ಥಾನಗಳು ಇಂದಿಗೂ ನಿಂತಿವೆ. ಜನರ ಮುಖ್ಯ ಕಸುಬು ಕೃಷಿ ಇಲ್ಲವೆ ಶಾಲು ನೇಯುವುದು.

 	
ಪಾಕಿಸ್ತಾನದ ನೂತನ ರಾಜಧಾನಿಯ ಹೆಸರು ಸಹ ಇಸ್ಲಾಮಾಬಾದ್. ಇದು ಪಶ್ಚಿಮ ಪಾಕಿಸ್ತಾನದಲ್ಲಿದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ